ಪೆಲ್ಟ್ಯೇ, ಜೀನ್ ಚಾಲ್ರ್ಸ್ ಅಥೆನಸ್
	1785-1845. ಫ್ರಾನ್ಸಿನ ಭೌತವಿಜ್ಞಾನಿ. ಸೀಬೆಕ್ ಪರಿಣಾಮಕ್ಕೆ ವಿಪರ್ಯಯವಾದ ಪರಿಣಾಮವನ್ನು ಶೋಧಿಸಿದ (1834) ಕೀರ್ತಿ ಇವನದು. ಬೇರೆ ಬೇರೆ ಲೋಹಗಳಿಂದ ರಚಿತವಾದ ಮಂಡಲದ ಎರಡು ಸಂಧಿಗಳಲ್ಲಿ ಒಂದನ್ನು ಕಾಸಿದರೆ ಆ ಮಂಡಲದಲ್ಲಿ ವಿದ್ಯುತ್ತು ಹರಿಯುತ್ತದೆ ಎಂಬುದೇ ಸೀಬೆಕ್ ಪರಿಣಾಮ. ಇಂಥ ಒಂದು ಮಂಡಲದ ಮೂಲಕ ವಿದ್ಯುತ್ತನ್ನು ಹರಿಸಿದರೆ ಒಂದು ಸಂಧಿ ತಣ್ಣಗಾಗುತ್ತದೆ. ಇನ್ನೊಂದು ಬಿಸಿಯಾಗುತ್ತದೆ. ಮಂಡಲದಲ್ಲಿ ಹರಿಯುವ ವಿದ್ಯುತ್ತಿನ ದಿ ಯನ್ನು ಬದಲಾಯಿಸಿದರೆ ಹಿಂದೆ ತಣ್ಣಗಾಗುತ್ತಿದ್ದ ಸಂಧಿ ಬಿಸಿಯಾಗುತ್ತದೆ ಮತ್ತು ಬಿಸಿಯಾಗುತ್ತಿದ್ದುದು ತಣ್ಣಗಾಗುತ್ತದೆ. ಬಿಸಿಯಾಗುವ ಸಂಧಿಯಲ್ಲಿ ಉಷ್ಣೋತ್ಪತ್ತಿಯಾಗುತ್ತದೆ ಮತ್ತು ತಣ್ಣಗಾಗುವ ಕಡೆ ಅದು ಹೀರಿಕೆಗೆ ಒಳಗಾಗುತ್ತದೆ. ಈ ಪರಿಣಾಮವನ್ನು ಪೆಲ್ಟ್ಯೇ ಶೋಧಿಸಿದುದರಿಂದ ಇದಕ್ಕೆ ಈತನ ಹೆಸರೇ ಬಂದಿದೆ. ಸ್ಥಿರವಿದ್ಯುತ್ ಪ್ರಚೋದನೆಯ ಕಲ್ಪನೆಯ ಪರಿಚಯಕ್ಕೂ ಈತನನ್ನು ನೆನಪಿಸಿಕೊಳ್ಳುವುದಿದೆ.

	ಪೆಲ್ಟ್ಯೇ ಜನಿಸಿದ್ದು 1785 ಫೆಬ್ರುವರಿ 22ರಂದು. ಹಾಮ್ ಪಟ್ಟಣದಲ್ಲಿ ಗಡಿಯಾರಗಳ ತಯಾರಕನಾಗಿ ಜೀವಿಸಿದ. 1845 ಅಕ್ಟೋಬರ್ 27ರಂದು ಪ್ಯಾರಿಸ್ ನಗರದಲ್ಲಿ ಮಡಿದ.
(ಎಸ್.ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ